ಧರ್ಮಚಕ್ರ ಪ್ರವರ್ತನ -
ವಾರಾಣಸಿಯ ಸಮೀಪದಲ್ಲಿರುವ ಮೃಗವನಕ್ಕೆ ಬಂದ ಬುದ್ಧ ಅಲ್ಲಿದ್ದ ತನ್ನ ಐವರು ಶಿಷ್ಯರಿಗೆ ಪ್ರಥಮವಾಗಿ ತಾನು ಅರಿತ ಧರ್ಮವನ್ನೂ ಉಪದೇಶ ಮಾಡಿದನಷ್ಟೆ.  ಅದನ್ನೇ ಧರ್ಮಚಕ್ರ ಪ್ರವರ್ತನ ಎಂಬ ಮಾತು ಸೂಚಿಸುತ್ತದೆ.  ಧರ್ಮ ಚಕ್ರರೂಪಿಯಾದ್ದು.  ಅದು ಉರುಳಿ ಎಲ್ಲರಿಗೂ ಧರ್ಮ ಮುಟ್ಟಲಿ ಎಂಬ ದೃಷ್ಟಿಯಿಂದ ಬುದ್ಧ ತನ್ನ ಧರ್ಮಚಕ್ರವನ್ನು ಮೃಗವನದಿಂದ ಪ್ರವರ್ತಿಸಿದ.  ತ್ರಿಪಿಟಕವೆಂಬ ಬೌದ್ಧ ಧರ್ಮಗ್ರಂಥದ ಮೊದಲ ಅಧ್ಯಾಯಕ್ಕೆ ಧರ್ಮಚಕ್ರ ಪ್ರವರ್ತನ ಸೂತ್ರವೆಂದೇ ಹೆಸರು.  ಈ ಸೂತ್ರದಲ್ಲಿ ನಾಲ್ಕು ಭಾಗಗಳಿವೆ.  ಪ್ರತಿಯೊಂದು ಭಾಗವೂ ಒಂದೊಂದು ಸತ್ಯವನ್ನು ಸಾರುತ್ತದೆ.  ಇವನ್ನು ಆರ್ಯಸತ್ಯಗಳೆಂದು ಕರೆದಿರುವರು.  ದುಃಖಸತ್ಯ, ದುಃಖಸಮುದಯಸತ್ಯ, ದುಃಖನಿರೋಧಸತ್ಯ ಮತ್ತು ದುಃಖ ನಿರೋಧ ಗಾಮಿನಿ ಮಾರ್ಗಸತ್ಯ - ಇವೇ ಆ ನಾಲ್ಕು ಸತ್ಯಗಳು.  ದುಃಖ ನಿರೋಧಕ್ಕಾಗಿ ಬುದ್ಧ ಸಮ್ಯಕ್‍ದೃಷ್ಟಿ, ಸಮ್ಯಕ್‍ಸಂಕಲ್ಪ, ಸಮ್ಯಕ್‍ವಾಕ್, ಸಮ್ಯಕ್ ಕರ್ಮಾಂತ, ಸಮ್ಯಕ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮøತಿ  ಮತ್ತು ಸಮ್ಯಕ್ ಸಮಾಧಿ ಎಂಬ ಎಂಟು ಅಂಶಗಳುಳ್ಳ ಅಷ್ಟಾಂಗ ಮಾರ್ಗವನ್ನು ಬೋಧಿಸಿದ.  ಆ ಮೇಲೆ ಮೃಗವನದಿಂದ ಹೊರಟ ಬುದ್ಧ ರಾಜಗೃಹ ಮೊದಲಾದ ಸ್ಥಳಗಳಲ್ಲಿ ಸಂಚರಿಸಿ ಅಸಂಖ್ಯಾತ ಶಿಷ್ಯ ಸಮುದಾಯಕ್ಕೆ ತನ್ನ ಉಪದೇಶಾಮೃತವನ್ನು ನೀಡಿ ತನ್ನ ಎಂಬತ್ತನೆಯ ವಯಸ್ಸಿನಲ್ಲಿ ಕುಶಿನಾರವೆಂಬಲ್ಲಿ ಮಹಾಪರಿನಿರ್ವಾಣ ಹೊಂದಿದ.

	ಧರ್ಮಚಕ್ರ ಬುದ್ಧನ ಅವಶೇಷಕ್ಕಿಂತಲೂ ಪ್ರಮುಖ ಸಂಕೇತಗಳಲ್ಲೊಂದೆನಿಸಿ ಪವಿತ್ರ ಸ್ಥಾನವನ್ನು ಹೊಂದಿ ಬೌದ್ಧರಿಂದ ಇಂದಿಗೂ ಪೂಜಾರ್ಹವಾಗಿದೆ.  ಬಾರ್ಹೂತ್‍ನಲ್ಲಿ ಒಂದು ಶಿಲ್ಪ ಈ ಚಕ್ರವನ್ನು ವರ್ಣಿಸುತ್ತದೆ.  ಬೌದ್ಧಾಲಯ ಒಂದರಲ್ಲಿ ಕಲ್ಲಿನ ಕೊಡೆಯ ಕೆಳಗೆ ಪಟ್ಟಿವಸ್ತ್ರ ಒಂದರಿಂದ ಅಲಂಕರಿಸಲ್ಪಟ್ಟ ಧರ್ಮಚಕ್ರ ಇದೆ.  ಅದರ ಎರಡು ಪಾಶ್ರ್ವಗಳಲ್ಲಿಯೂ ಇಬ್ಬರು ಪುರುಷರು ತಮ್ಮ ಎದೆಯ ಮೇಲೆ ಕೈಗಳೆರಡನ್ನೂ ಅಡ್ಡಲಾಗಿ ಹಿಡಿದುಕೊಂಡು ನಿಂತಿದ್ದಾರೆ.  ಈ ಶಿಲ್ಪದ ಕೆಳಭಾಗದಲ್ಲಿ ನಾಲ್ಕು ಕುದುರೆಗಳಿಂದಲಂಕರಿಸಲ್ಪಟ್ಟ ರಥವಿದೆ.  ಅದರಲ್ಲಿ ಅರಸನೊಬ್ಬ ಕುಳಿತಿದ್ದಾನೆ. ಶಿಲ್ಪದ ಮೇಲಿರುವ ಲೇಖನದಿಂದ ಈ ಅರಸ ಕೋಸಲ ದೇಶದ ಪ್ರಸೇನಜಿತನೆಂದು ತಿಳಿದುಬರುತ್ತದೆ.  ವಿಶೇಷವೆಂದರೆ ಚಕ್ರವನ್ನು ಎತ್ತರವಾದ ಶಿಲಾಸ್ತಂಭವೊಂದರ ಮೇಲೆ ಕೆತ್ತಲಾಗಿದೆ.  ಇಂಥ ನಿದರ್ಶನಗಳು ಸಾಂಚಿ, ಗಯಾ ಹಾಗೂ ಶ್ರಾವಸ್ತಿ ನಗರಗಳಲ್ಲಿವೆ.

	ಶ್ರಾವಸ್ತಿ ಮತ್ತು ಚೇತವನ ವಿಹಾರಗಳಲ್ಲಿರುವ ಶಿಲ್ಪಗಳನ್ನು ಅಶೋಕ ಮೌರ್ಯ ನಿರ್ಮಿಸಿದ.  ಇವುಗಳ ಎತ್ತರ ಎಂಬತ್ತು ಅಡಿ.  ಎಡಭಾಗದಲ್ಲಿರುವ ಸ್ತಂಭ ಧರ್ಮಚಕ್ರದ ಮೇಲೆ ನಿಂತಿದೆ.  ಬಲಭಾಗದ ಸ್ತಂಭ ವೃಷಭದ ಮೇಲೆ ನಿಂತಿದೆ.

	ಧರ್ಮಚಕ್ರವನ್ನು ಪ್ರತಿಬಿಂಬಿಸುವ ಶಿಲಾಸ್ತಂಭಗಳಲ್ಲೆಲ್ಲ ಅಶೋಕ ಸಾರನಾಥದಲ್ಲಿ ನಿರ್ಮಿಸಿರುವ ಸಿಂಹರೂಪದ ಶಿಲಾಸ್ತಂಭವೇ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವೂ ಆಕರ್ಷಣೀಯವೂ ಆಗಿದೆ.  ವಾಸ್ತವವಾಗಿ ನೋಡಿದರೆ ಈ ಸ್ತಂಭ ಧರ್ಮಚಕ್ರ ಸ್ತಂಭವೇ ಹೊರತು ಸಿಂಹರೂಪದ ಸ್ತಂಭವಾಗಿರಲಿಲ್ಲ.  ಚಕ್ರ ಮೊದಲು ಎರಡು ಸಿಂಹಗಳ ನಡುವಿನ ಅಂತರದಲ್ಲಿತ್ತು.  ಇಂದಿಗೂ ಈ ಚಕ್ರದ ಏಳು ಭಾಗಗಳು ಉಳಿದುಬಂದಿವೆ.  ಚೀನದೇಶದ ಬೌದ್ಧಯಾತ್ರಿಕನಾದ ಹ್ಯುಯೆನ್‍ತ್ಸಾಂಗ್ ಕೂಡ ಈ ಚಕ್ರವನ್ನು ಧರ್ಮಚಕ್ರ ಶಿಲಾಸ್ತಂಭವೆಂದೇ ಹೇಳಿದ್ದಾನೆ.  ಕಾಲಕ್ರಮದಲ್ಲಿ ಇದಕ್ಕೆ ಸಿಂಹ ರೂಪದ ಶಿಲಾಸ್ತಂಭವೆಂಬ ಹೆಸರು ಬಂತು.  ನಾಲ್ಕು ಸಿಂಹಗಳನ್ನು ಹೊಂದಿರುವ ಸಾರನಾಥ ಶಿಲಾಸ್ತಂಭ ಕ್ರಿ. ಪೂ. 3 ನೆಯ ಶತಮಾನದಲ್ಲಿ ವಿಶೇಷವಾಗಿ ಕಲಾನೈಪುಣ್ಯಗಳನ್ನು ಪಡೆದಿದ್ದ ಶಿಲ್ಪಗಳಿಂದ ನಿರ್ಮಿಸಲ್ಪಟ್ಟಿತೆಂದು ಜಾನ್‍ಮಾರ್ಷಲ್ ಹೇಳಿದ್ದಾನೆ.  ಇಲ್ಲಿನ ಸ್ತಂಭದ ಮೇಲೆ ಒಂದು ಆನೆ, ಓಡುತ್ತಿರುವ ಒಂದು ಕುದುರೆ, ಒಂದು ವೃಷಭ ಮತ್ತು ಒಂದು ಸಿಂಹ ಇವೆ.  ಈ ಚೌಕಟ್ಟಿನ ಮೇಲೆ ಕುಳಿತಿರುವ ನಾಲ್ಕು ಸಿಂಹಗಳ ತಲೆಯನ್ನಾಶ್ರಯಿಸಿ ನಿಂತಿರುವ ಧರ್ಮಚಕ್ರದಲ್ಲಿ ಇಪ್ಪತ್ನಾಲ್ಕು ಕಲ್ಲಿನ ಅರಗಳಿವೆ.
	(ನೋಡಿ- ಅಶೋಕ-ಚಕ್ರ)
(ಸಿ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ